ಕೃಷ್ಣಪ್ಪ, ಬಿ
	-1955. ಕನ್ನಡ ನುಡಿ ಸೇವೆಯಲ್ಲಿ ನಿರತರಾದ ಹಳಬರಲ್ಲೊಬ್ಬರು; ಮೈಸೂರಿನವರು. 1907ರಲ್ಲಿ ಬಿ.ಎ. ಪದವೀಧರರಾಗಿ ಮೈಸೂರು ಪ್ರಾಂತ್ಯದ ಅನೇಕ ಕಡೆಗಳಲ್ಲಿ ಸುಮಾರು ಏಳೆಂಟು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿ, 1915ರಲ್ಲಿ ಮೈಸೂರಿಗೆ ಬಂದರು. ಅಲ್ಲಿ ಕುರುಡ-ಮೂಗರ ಶಾಲೆಯ ಮುಖ್ಯೋಪಾಧ್ಯಾಯರಾದರು. ಮುಂದೆ ಕನ್ನಡ ಭಾಷೆ, ಸಾಹಿತ್ಯಗಳಲ್ಲಿ ಎಂ.ಎ., ಪದವಿ ಪಡೆದು ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರಾದರು. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದ ಬಳಿಕ ಮೈಸೂರು ಮಹಾರಾಜರವರ ಕಾಲೇಜಿನಲ್ಲಿ ಮೊತ್ತಮೊದಲ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.

	ಬಿ. ಕೃಷ್ಣಪ್ಪನವರು ವಿದ್ಯಾದಾಯಿನಿ ಮಾಸಪತ್ರಿಕೆಗೂ ಬಾಪು ಅನಂತಸುಬ್ಬರಾಯರ ಅನಂತರ ಕರ್ಣಾಟಕ ಗ್ರಂಥಮಾಲೆಗೂ ಸಂಪಾದಕರಾಗಿದ್ದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಮೊತ್ತಮೊದಲ ಕಾರ್ಯದರ್ಶಿಯಾಗಿದ್ದರು ಎಂಬುದು ಗಮನಾರ್ಹ ಸಂಗತಿ. 1919 ರಿಂದ 1926ರವರೆಗೆ ಇವರು ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಉಪಾಧ್ಯಕ್ಷರಾಗಿದ್ದರು.

	ಟಿ. ಶ್ರೀನಿವಾಸರಾಘವಾಚಾರ್ಯರೊಡನೆ ಸಹಲೇಖಕರಾಗಿ ಕೃಷ್ಣಪ್ಪನವರು ಕನ್ನಡ ಕೈಪಿಡಿಯ ಮೊದಲ ಸಂಪುಟದ ಮೊದಲನೆಯ ಭಾಗವಾದ ಹಳಗನ್ನಡ ವ್ಯಾಕರಣವನ್ನು ಬರೆದಿರುವರಲ್ಲದೆ ಅಭಿe್ಞÁನ ಶಾಕುಂತಲ ನಾಟಕದ ಗದ್ಯಾನುವಾದವನ್ನೂ ವಿಮರ್ಶೆಯನ್ನೂ ಕನಕೋರ್ಣಾರ್ಜುನ ಎಂಬ ವನಸ್ಪತಿಶಾಸ್ರ್ತಕ್ಕೆ ಸಂಬಂಧಿಸಿದ ಗ್ರಂಥವನ್ನೂ ಟ್ರೋಜನ್ ದಂಡಯಾತ್ರೆ, ಯವನ ಮಹಾವೀರ ಚರಿತ್ರೆ, ಯವನವೀರ ಕಥಾವಳಿ-ಮೊದಲಾದ ಕಥಾಸಾಹಿತ್ಯಕೃತಿಗಳನ್ನು ಬರೆದಿರುವರು.

	ಕಣ್ಣುಬೇನೆಯಿಂದಾಗಿ ಕೃಷ್ಣಪ್ಪನವರು ನಿವೃತ್ತರಾಗುವ ಮೊದಲೇ ಕೆಲಸವನ್ನು ಬಿಟ್ಟು 2ನೆಯ ಮಾರ್ಚ್, 1955ರಲ್ಲಿ ಮೃತರಾದರು.										
	(ಜಿ.ಸಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ